ಪ್ರತಿಮಾದೇವಿ ಶಂಕರಸಿಂಗ್
(1933- ). ಕನ್ನಡದ ಹಿರಿಯ ನಟಿ ಚಿತ್ರ ನಿರ್ಮಾಪಕಿ ಪ್ರತಿಮಾದೇವಿ ಉಡುಪಿಯವರು. ತಂದೆ ಉಪೇಂದ್ರ ಶೆಣೈ. ಹುಟ್ಟಿದ್ದು 1933ರಲ್ಲಿ. ಮನೆಯವರು ಇಟ್ಟ ಹೆಸರು ಮೋಹಿನಿ. ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು. ಬಾಲಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಗಳಿಸಿದ್ದರು. ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆಂದು ಮೈಸೂರಿಗೆ ಆಗಮನ. ಆಗ ಅರಸೀಕೆರೆಯ ಶಂಕರಸಿಂಗ್, ಡಿ.ವಿಠಲಾಚಾರ್ಯ, ಬಿ.ವಿಶ್ವನಾಥಶೆಟ್ಟಿ ಮಹಾತ್ಮ ಪಿಕ್ಷರ್ಸ್ ಸಂಸ್ಥೆ ಸ್ಥಾಪಿಸಿ, `ಕೃಷ್ಣಲೀಲಾ (1948) ಚಿತ್ರದ ನಿರ್ಮಾಣದ ಸನ್ನಾಹದಲ್ಲಿದ್ದರು. ನಟ, ನಟಿಯರ ಶೋಧನೆಯಲ್ಲಿದ್ದರು. ಮೋಹಿನಿಗೆ ಅವಕಾಶ ಪ್ರಾಪ್ತಿ. ಪುಟ್ಟ ಪಾತ್ರವಾದರೂ ಒಪ್ಪಿಗೆ ನೀಡಿದರು. ಪ್ರತಿಮಾದೇವಿಯಾಗಿ ತೆರೆಯ ಮೇಲೆ ಅನಾವರಣಗೊಂಡರು.
`ಬಿಂದು ಬಿ.ಎ.' ಚಿತ್ರದಲ್ಲಿ ನಾಯಕಿಯಾಗಿ ಅಭಿನಯದ ಅವಕಾಶ. ಈ ಚಿತ್ರಕ್ಕೆ ಬಾಲಗ್ರಹಪೀಡೆ. ಕೃಷ್ಣಲೀಲಾ ನಿರ್ಮಾಣ ಕಾಲದಲ್ಲಿ ಶಂಕರಸಿಂಗ್ ಅವರೊಡನೆ ಆದ ಸ್ನೇಹ ಪಕ್ವಗೊಂಡಿತು. ಪ್ರತಿಮಾಶಂಕರಸಿಂಗ್ ಆಗಿ ಗೃಹಿಣಿಯಾದರು. ಆದರೂ ಚಿತ್ರರಂಗ ಬಿಡಲಿಲ್ಲ. ಶಂಕರಸಿಂಗ್ ನಿರ್ದೇಶನದಲ್ಲಿ ರಜತೋತ್ಸವ ಆಚರಿಸಿದ `ಜಗನ್ಮೋಹಿನಿ(1951)ಯಲ್ಲಿ ಅವರದೊಂದು ಮುಖ್ಯ ಪಾತ್ರ. ಪ್ರತಿಮಾದೇವಿ ಮಹಾತ್ಮ ಪಿಕ್ಚರ್ಸ್‍ನ ಬಹುತೇಕ ಎಲ್ಲ ಚಿತ್ರಗಳಲ್ಲೂ ಪಾತ್ರ ವಹಿಸಿದ್ದಾರೆ. ರಾಜಕುಮಾರ್ ಅಭಿನಯಿಸಿದ `ಭಕ್ತ ಚೇತಾ(1961) ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಪುತ್ರ  ಬಾಬು-ರಾಜೇಂದ್ರಸಿಂಗ್ ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. `ಭಕ್ತ ರಾಮದಾಸ್, `ಮಹಾನಂದ, `ಚಂಚಲಕುಮಾರಿ', `ನಾಗಕನ್ನಿಕಾ, `ಶಿವಶರಣೆ ನಂಬಿಯಕ್ಕ, `ಶ್ರೀನಿವಾಸ ಕಲ್ಯಾಣ', `ಧರ್ಮಸ್ಥಳ ಮಹಾತ್ಮೆ, `ವರದಕ್ಷಿಣೆ, `ಮಾಡಿದ್ದುಣ್ಣೋ ಮಹಾರಾಯ, `ರಾಜಾ ಸತ್ಯವ್ರತ, `ಮುಟ್ಟಿದ್ದೆಲ್ಲಾ ಚಿನ್ನ, `ಆಷಾಢಭೂತಿ', `ಗಂಧರ್ವಕನ್ಯೆ- ಇವೇ ಮೊದಲಾದ ಚಿತ್ರಗಳಲ್ಲಿ ಪ್ರತಿಮಾದೇವಿ ಅಭಿನಯಿಸಿದ್ದಾರೆ.
ಪ್ರತಿಮಾ ಅವರದು ಸಂತೃಪ್ತ ಕುಟುಂಬ. ಇಡೀ ಕುಟುಂಬ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. `ಭಕ್ತ ಚೇತದಲ್ಲಿ ಬಾಲನಟನಾಗಿ ಅಭಿನಯಿಸಿದ `ಬಾಬು- ರಾಜೇಂದ್ರಸಿಂಗ್ ಈಗ ಹೆಸರಾಂತ ನಿರ್ಮಾಪಕ, ನಿರ್ದೇಶಕ. ಮಗಳು ವಿಜಯಲಕ್ಷ್ಮೀ ನಟಿ, ನಿರ್ಮಾಪಕಿ, ವಸ್ತ್ರ ವಿನ್ಯಾಸಕಿ, ಮೊಮ್ಮಗ ದುಷ್ಯಂತ ಸಿಂಗ್ ನಿರ್ಮಾಪಕ. ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಶಂಕರ್‍ಸಿಂಗ್ ಅವರಲ್ಲಿಗೆ ಬಂದು ಅವರ ಬಾಳಸಂಗಾತಿಯಾದ ಪ್ರತಿಮಾ, ಕುಟುಂಬ ನಿರ್ವಹಿಸುವುದರ ಜೊತೆಗೆ ಅವರ ನಿರ್ಮಾಣದ ಚಿತ್ರಗಳಲ್ಲಿಯೂ ಅಭಿನಯಿಸಿದರು. ಇಷ್ಟು ಮಾತ್ರವಲ್ಲ, ತಮ್ಮ ಪತಿಯ ಚಿತ್ರ ನಿರ್ಮಾಣ ಸಾಹಸದಲ್ಲಿ ಅವರಿಗೆ ಒತ್ತಾಸೆಯಾಗಿ ನಿಂತರು.
ಸ್ವಾತಂತ್ರ್ಯ ಹೋರಾಟಗಾರರಾಗಿ, ಚಿತ್ರ ಪ್ರದರ್ಶಕರಾಗಿ, ಅನಂತರ ಚಿತ್ರನಿರ್ಮಾಣದಲ್ಲಿ ತೊಡಗಿಸಿಕೊಂಡ ಡಿ. ಶಂಕರ್‍ಸಿಂಗ್, ಕನ್ನಡ ಚಿತ್ರರಂಗದ ಆಧಾರ ಸ್ತಂಭವಾಗಿದ್ದರು. ಕನ್ನಡ ಚಿತ್ರ ನಿರ್ಮಾಣ ತಯಾರಿಕೆಯೇ ಇಲ್ಲದಂತಹ ಪರಿಸ್ಥಿತಿ, ಮಾರುಕಟ್ಟೆಯಲ್ಲಿ ಸಮೃದ್ಧವಾಗಿ ಲಭ್ಯವಿದ್ದ ಹಿಂದಿ, ತಮಿಳು, ತೆಲುಗು ಚಿತ್ರಗಳನ್ನೇ ಕನ್ನಡ ಪ್ರೇಕ್ಷಕ ನೋಡಬೇಕಾದ ಅನಿವಾರ್ಯತೆ.  ಅ ಕಾಲದಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ನಾಡಿನಲ್ಲೇ ನಿರ್ಮಿಸಿ, ಕನ್ನಡ ಪ್ರೇಕ್ಷಕರನ್ನು ತಣಿಸಿದರು. ಕನ್ನಡ ಚಿತ್ರಗಳನ್ನು ನೋಡಬೇಕೆನ್ನುವ ಅಭಿರುಚಿ ಬೆಳೆಸಿದರು. ಕನ್ನಡ ಚಿತ್ರೋದ್ಯಮಕ್ಕೆ ಸ್ಥಿರತೆಯನ್ನು ತಂದುಕೊಟ್ಟರು. ಇಂತಹ ಧೀಮಂತನ ಬಾಳಸಂಗಾತಿಗೆ 2001-2002ನೇ ಸಾಲಿನ ಪ್ರತಿಷ್ಠಿತ `ಡಾ. ರಾಜಕುಮಾರ್ ಪ್ರಶಸ್ತಿ ನೀಡಿ ಸರಕಾರ ಗೌರವಿಸಿದೆ.	
(ನೋಡಿ- ರಾಜೇಂದ್ರಸಿಂಗ್-(ಬಾಬು),-ಎಸ್-ವಿ)																		(ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ